1 ಕೊರಿಂಥದವರಿಗೆ 1

1ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ. 2ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ. 3ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ. 4ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. 6ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. 7ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. 8ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. 9ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ. 10ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. 11ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು. 12ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ. 13ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ! 14ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 15ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16(ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.) 17ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು. 18ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ: “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು. ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.” 20ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು. 22ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ. 26ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”


Copyrighted Material
Learn More

will be added

X\