1 ಕೊರಿಂಥದವರಿಗೆ 3

1ಸಹೋದರ ಸಹೋದರಿಯರೇ, ನಾನು ಆತ್ಮಿಕ ಜನರೊಂದಿಗೆ ಮಾತಾಡುವಂತೆ ಮೊದಲು ನಿಮ್ಮೊಂದಿಗೆ ಮಾತಾಡಲಾಗಲಿಲ್ಲ. ಪ್ರಾಪಂಚಿಕರೂ ಕ್ರಿಸ್ತನಲ್ಲಿ ಎಳೆಕೂಸುಗಳೂ ಆಗಿರುವಂಥವರೊಂದಿಗೆ ಮಾತಾಡುವಂತೆ ನಾನು ನಿಮ್ಮೊಂದಿಗೆ ಮಾತಾಡಬೇಕಾಯಿತು. 2ನಾನು ನಿಮಗೆ ಮಾಡಿದ ಉಪದೇಶವು ಗಟ್ಟಿಯಾದ ಆಹಾರದಂತಿರದೆ ಹಾಲಿನಂತಿತ್ತು; ಏಕೆಂದರೆ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವಿನ್ನೂ ಸಿದ್ಧರಾಗಿರಲಿಲ್ಲ. ಈಗಲೂ ಸಹ ಗಟ್ಟಿಯಾದ ಆಹಾರವನ್ನು ತೆಗೆದುಕೊಳ್ಳಲು ನೀವು ಸಿದ್ಧರಾಗಿಲ್ಲ. 3ನೀವಿನ್ನೂ ಆತ್ಮಿಕರಾಗಿಲ್ಲ. ನಿಮ್ಮ ನಡುವೆ ಹೊಟ್ಟೆಕಿಚ್ಚಿದೆ; ವಾಗ್ವಾದಗಳಿವೆ; ಜಗಳಗಳಿವೆ. ನೀವು ಆತ್ಮಿಕರಲ್ಲವೆಂಬುದನ್ನು ಇವು ಸೂಚಿಸುತ್ತವೆ. ನೀವು ಲೋಕದ ಜನರಂತೆಯೇ ವರ್ತಿಸುತ್ತಿದ್ದೀರಿ. 4ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ಮತ್ತೊಬ್ಬನು “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎನ್ನುತ್ತಾನೆ. ನೀವು ಹೀಗೆ ವಾಗ್ವಾದ ಮಾಡುವಾಗ ಲೋಕದ ಜನರಂತೆಯೇ ವರ್ತಿಸುವವರಾಗಿದ್ದೀರಿ. 5ಅಪೊಲ್ಲೋಸನು ಮುಖ್ಯವಾದವನೇ? ಇಲ್ಲ! ಪೌಲನು ಮುಖ್ಯವಾದವನೇ? ಇಲ್ಲ! ನೀವು ನಂಬಿಕೊಳ್ಳಲು ಸಹಾಯ ಮಾಡುವ ನಾವು ಕೇವಲ ದೇವರ ಸೇವಕರಾಗಿದ್ದೇವೆ. ದೇವರು ನಮಗೆ ಕೊಟ್ಟ ಕೆಲಸವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಮಾಡಿದೆವು. 6ನಾನು ಬೀಜವನ್ನು ಬಿತ್ತಿದೆನು; ಅಪೊಲ್ಲೋಸನು ನೀರನ್ನು ಹಾಕಿದನು. ಆದರೆ ಬೀಜವನ್ನು ಬೆಳೆಯಿಸಿದವನು ದೇವರೇ. 7ಆದ್ದರಿಂದ ಬೀಜ ಬಿತ್ತುವವನಾಗಲಿ ನೀರು ಹಾಕುವವನಾಗಲಿ ಮುಖ್ಯನಲ್ಲ. ದೇವರೊಬ್ಬನು ಮಾತ್ರ ಮುಖ್ಯವಾದವನು, ಏಕೆಂದರೆ ಬೀಜಗಳನ್ನು ಬೆಳೆಯಿಸುವವನು ಆತನೊಬ್ಬನೇ. 8ಬೀಜ ಬಿತ್ತುವವನ ಮತ್ತು ನೀರನ್ನು ಹಾಕುವವನ ಉದ್ದೇಶವು ಒಂದೇ ಆಗಿದೆ. ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವುದು. 9ನಾವು ದೇವರ ಜೊತೆಕೆಲಸದವರಾಗಿದ್ದೇವೆ. ನೀವು ದೇವರ ಹೊಲವಾಗಿದ್ದೀರಿ. ಇದಲ್ಲದೆ ನೀವು ದೇವರ ಕಟ್ಟಡವಾಗಿದ್ದೀರಿ. 10ದೇವರು ನನಗೆ ಕೊಟ್ಟ ವರದಾನಗಳನ್ನು ಉಪಯೋಗಿಸಿ ಚತುರ ಶಿಲ್ಪಿಯಂತೆ ನಾನು ಆ ಮನೆಗೆ ಅಸ್ತಿವಾರವನ್ನು ಹಾಕಿದೆನು. ಇತರ ಜನರು ಆ ಅಸ್ತಿವಾರದ ಮೇಲೆ ಕಟ್ಟುತ್ತಿದ್ದಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. 11ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು. 12ಒಬ್ಬ ವ್ಯಕ್ತಿಯು ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಮರ, ಹುಲ್ಲು ಮತ್ತು ಜೊಂಡುಗಳಿಂದ ಕಟ್ಟಬಹುದು. 13ಆದರೆ ಪ್ರತಿಯೊಬ್ಬನ ಕೆಲಸವು ಸ್ಪಷ್ಟವಾಗಿ ಕಾಣುವುದು; ಏಕೆಂದರೆ, ಕ್ರಿಸ್ತನು ಬರುವ ದಿನವು ಅದನ್ನು ಸ್ಪಷ್ಟಪಡಿಸುವುದು. ಆ ದಿನವು ಬೆಂಕಿಯೊಂದಿಗೆ ಉದಯಿಸುವುದು. ಆ ಬೆಂಕಿಯು ಪ್ರತಿಯೊಬ್ಬ ವ್ಯಕ್ತಿಯ ಕೆಲಸವನ್ನು ಪರೀಕ್ಷಿಸುವುದು. 14ಅಸ್ತಿವಾರದ ಮೇಲೆ ಕಟ್ಟಿದ ಕಟ್ಟಡವು ಸ್ಥಿರವಾಗಿದ್ದರೆ, ಕಟ್ಟಿದವನು ಪ್ರತಿಫಲವನ್ನು ಹೊಂದಿಕೊಳ್ಳುವನು. 15ಆದರೆ ಕಟ್ಟಡವು ಸುಟ್ಟುಹೋದರೆ, ಕಟ್ಟಿದವನಿಗೆ ನಷ್ಟವಾಗುವುದು. ಅವನು ರಕ್ಷಣೆ ಹೊಂದುವನು, ಆದರೆ ಅವನು ಬೆಂಕಿಯಿಂದ ತಪ್ಪಿಸಿಕೊಂಡವನಂತಿರುವನು. 16ನೀವೇ ದೇವರ ಆಲಯವಾಗಿದ್ದೀರಿ. ಇದು ನಿಮಗೆ ಚೆನ್ನಾಗಿ ತಿಳಿದಿದೆ. ದೇವರಾತ್ಮನು ನಿಮ್ಮೊಳಗೆ ವಾಸವಾಗಿದ್ದಾನೆ. 17ಯಾವನಾದರೂ ದೇವರ ಆಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುವನು. ಏಕೆಂದರೆ ದೇವರ ಆಲಯವು ಪರಿಶುದ್ಧವಾದದ್ದು. ನೀವೇ ದೇವರ ಆಲಯವಾಗಿದ್ದೀರಿ. 18ನಿಮಗೆ ನೀವೇ ಮೋಸಮಾಡಿಕೊಳ್ಳಬೇಡಿ. ನಿಮ್ಮಲ್ಲಿರುವ ಯಾವನಾದರೂ ತಾನು ಈ ಲೋಕದಲ್ಲಿ ಜ್ಞಾನಿಯೆಂದು ಆಲೋಚಿಸಿಕೊಂಡರೆ ಅವನು ಮೂಢನಾಗಲೇಬೇಕು. ಆಗ ಆ ವ್ಯಕ್ತಿಯು ನಿಜವಾಗಿಯೂ ಜ್ಞಾನಿಯಾಗಬಲ್ಲನು. 19ಏಕೆಂದರೆ ಈ ಲೋಕದ ಜ್ಞಾನವು ದೇವರಿಗೆ ಮೂರ್ಖತನವಾಗಿದೆ. “ದೇವರು ಜಾಣರನ್ನು ಅವರ ಕುತಂತ್ರದ ಮಾರ್ಗಗಳಲ್ಲೇ ಹಿಡಿದುಕೊಳ್ಳುವನು” ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. 20“ಪ್ರಭುವು ಜ್ಞಾನಿಗಳ ಆಲೋಚನೆಗಳನ್ನು ತಿಳಿದಿದ್ದಾನೆ. ಅವರ ಆಲೋಚನೆಗಳು ನಿಷ್ಪ್ರಯೋಜಕವೆಂದು ಆತನಿಗೆ ಗೊತ್ತಿದೆ” ಎಂದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 21ಆದ್ದರಿಂದ ನೀವು ಜನರ ಬಗ್ಗೆ ಹೆಚ್ಚಳಪಡಬಾರದು. ಸಮಸ್ತವೂ ನಿಮ್ಮದೇ. 22ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ. 23ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ. ಕ್ರಿಸ್ತನು ದೇವರಿಗೆ ಸೇರಿದವನಾಗಿದ್ದಾನೆ.


Copyrighted Material
Learn More

will be added

X\