1 ಯೋಹಾನ 1

1ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು. 2ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು. 3ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. 4ನಮ್ಮ ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ. 5ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. 6ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. 7ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ. 8ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. 9ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.


Copyrighted Material
Learn More

will be added

X\