ಅಪೊಸ್ತಲರ ಕಾರ್ಯಗಳು 13

1ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. 2ಇವರೆಲ್ಲರು ಪ್ರಭುವಿನ ಸೇವೆ ಮಾಡುತ್ತಿದ್ದರು ಮತ್ತು ಉಪವಾಸ ಮಾಡುತ್ತಿದ್ದರು. ಪವಿತ್ರಾತ್ಮನು ಅವರಿಗೆ, “ನಾನು ವಿಶೇಷವಾದ ಕಾರ್ಯಕ್ಕಾಗಿ ಬಾರ್ನಬ ಮತ್ತು ಸೌಲರನ್ನು ಆರಿಸಿಕೊಂಡಿದ್ದೇನೆ. ಆ ಕಾರ್ಯಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ” ಎಂದು ಹೇಳಿದನು. 3ಆದ್ದರಿಂದ ಸಭೆಯವರು ಉಪವಾಸವಿದ್ದು ಪ್ರಾರ್ಥನೆ ಮಾಡಿದರು. ಅವರು ಬಾರ್ನಬ ಮತ್ತು ಸೌಲರ ಮೇಲೆ ಹಸ್ತಾರ್ಪಣೆ ಮಾಡಿ ಅವರನ್ನು ಕಳುಹಿಸಿಕೊಟ್ಟರು. 4ಬಾರ್ನಬ ಮತ್ತು ಸೌಲರನ್ನು ಪವಿತ್ರಾತ್ಮನೇ ಕಳುಹಿಸಿಕೊಟ್ಟನು. ಅವರು ಸೆಲೂಸಿಯಾ ಪಟ್ಟಣಕ್ಕೆ ಹೋದರು. ಬಳಿಕ ಅವರು ಸೆಲೂಸಿಯಾದಿಂದ ಸೈಪ್ರಸ್ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿದರು. 5ಬಾರ್ನಬ ಮತ್ತು ಸೌಲರು ಸಲಾಮಿಸ್ ಪಟ್ಟಣಕ್ಕೆ ಬಂದಾಗ ಯೆಹೂದ್ಯರ ಸಭಾಮಂದಿರದಲ್ಲಿ ದೇವರ ಸಂದೇಶವನ್ನು ಸಾರಿದರು. (ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯ ಮಾಡುವುದಕ್ಕಾಗಿ ಅವರೊಂದಿಗಿದ್ದನು.) 6ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ. 7ಸೆರ್ಗ್ಯಪೌಲನೆಂಬ ರಾಜ್ಯಪಾಲನ ಹತ್ತಿರದಲ್ಲೇ ಅವನು ಯಾವಾಗಲೂ ಇರುತ್ತಿದ್ದನು. ಸೆರ್ಗ್ಯಪೌಲನು ಜ್ಞಾನವಂತನಾಗಿದ್ದನು. ಅವನು ದೇವರ ವಾಕ್ಯವನ್ನು ಕೇಳಲು ಬಾರ್ನಬ ಮತ್ತು ಸೌಲರನ್ನು ಆಮಂತ್ರಿಸಿದನು. 8ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು. 9ಆದರೆ ಪೌಲನು (ಸೌಲನ ಮತ್ತೊಂದು ಹೆಸರು ಪೌಲ.) ಪವಿತ್ರಾತ್ಮಭರಿತನಾದನು. ಪೌಲನು ಎಲಿಮನನ್ನು ದಿಟ್ಟಿಸಿ ನೋಡಿ, 10ಅವನಿಗೆ, “ನೀನು ಸೈತಾನನ ಮಗ! ಪ್ರತಿಯೊಂದು ಒಳ್ಳೆಯದಕ್ಕೂ ನೀನು ಶತ್ರು! ನೀನು ದುಷ್ಟತಂತ್ರಗಳಿಂದಲೂ ಸುಳ್ಳುಗಳಿಂದಲೂ ತುಂಬಿದವನಾಗಿರುವೆ. ಪ್ರಭುವಿನ ಸತ್ಯಗಳನ್ನು ಸುಳ್ಳುಗಳನ್ನಾಗಿ ಪರಿವರ್ತಿಸಲು ನೀನು ಯಾವಾಗಲೂ ಪ್ರಯತ್ನಿಸುತ್ತಿರುವೆ! 11ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು. ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು. 12ಇದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ನಂಬಿಕೊಂಡನು. ಪ್ರಭುವಿನ ವಿಷಯವಾದ ಉಪದೇಶವನ್ನು ಕೇಳಿ ವಿಸ್ಮಿತನಾದನು. 13ಪೌಲ ಮತ್ತು ಅವನ ಸಂಗಡಿಗರು ಪಾಫೋಸಿನಿಂದ ನೌಕಾಯಾನ ಮಾಡಿದರು. ಪಾಂಫೀಲಿಯ ಪ್ರಾಂತ್ಯದಲ್ಲಿದ್ದ ಪೆರ್ಗ ಎಂಬ ಪಟ್ಟಣಕ್ಕೆ ಅವರು ಬಂದರು. ಆದರೆ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟು ಜೆರುಸಲೇಮಿಗೆ ಹಿಂತಿರುಗಿದನು. 14ಅವರು ತಮ್ಮ ಪ್ರಯಾಣವನ್ನು ಪೆರ್ಗದಿಂದ ಮುಂದುವರಿಸಿ, ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಹೋದರು. ಅವರು ಅಂತಿಯೋಕ್ಯಕ್ಕೆ ಸಬ್ಬತ್ ದಿನದಂದು ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು. 15ಮೋಶೆಯ ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳ ಗ್ರಂಥಗಳನ್ನು ಓದಲಾಯಿತು. ಬಳಿಕ ಸಭಾಮಂದಿರದ ನಾಯಕರು ಪೌಲ ಬಾರ್ನಬರಿಗೆ, “ಸಹೋದರರೇ, ಇಲ್ಲಿರುವ ಜನರಿಗೆ ಸಹಾಯವಾಗುವಂತೆ ಏನನ್ನಾದರೂ ನೀವು ಹೇಳಬೇಕೆಂದಿದ್ದರೆ, ದಯವಿಟ್ಟು ಹೇಳಿ!” ಎಂಬ ಸಂದೇಶವನ್ನು ಕಳುಹಿಸಿದರು. 16ಪೌಲನು ಎದ್ದುನಿಂತುಕೊಂಡು ತನ್ನ ಮಾತುಗಳನ್ನು ಕೇಳಬೇಕೆಂದು ಜನರಿಗೆ ಕೈಸನ್ನೆ ಮಾಡಿ ಹೀಗೆಂದನು: “ನನ್ನ ಯೆಹೂದ್ಯ ಸಹೋದರರೇ, ನಿಜ ದೇವರನ್ನು ಆರಾಧಿಸುವ ಇತರ ಜನರೇ, ದಯವಿಟ್ಟು ನನಗೆ ಕಿವಿಗೊಡಿರಿ! 17ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. 18ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಅವರನ್ನು ಸಹಿಸಿಕೊಂಡನು. 19ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ತನ್ನ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟನು. 20ಇವೆಲ್ಲಾ ಸುಮಾರು ನಾನೂರ ಐವತ್ತು ವರ್ಷಗಳ ಅವಧಿಯಲ್ಲಿ ನಡೆದವು. “ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ದೇವರು ನಮ್ಮ ಜನರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು. 21ಬಳಿಕ ಜನರು ತಮಗೆ ರಾಜನು ಬೇಕೆಂದು ಕೇಳಿಕೊಂಡರು. ದೇವರು ಅವರಿಗೆ ಕೀಷನ ಮಗನಾದ ಸೌಲನನ್ನು ಕೊಟ್ಟನು. ಸೌಲನು ಬೆನ್ಯಾಮಿನ್ ಕುಲದವನು. ಅವನು ನಲವತ್ತು ವರ್ಷಗಳ ಕಾಲ ರಾಜನಾಗಿದ್ದನು. 22ದೇವರು ಸೌಲನನ್ನು ತೆಗೆದುಹಾಕಿದ ಮೇಲೆ ದಾವೀದನನ್ನು ಅವರ ರಾಜನನ್ನಾಗಿ ಮಾಡಿದನು. ‘ಇಷಯನ ಮಗನಾದ ದಾವೀದನು ನನಗೆ ಮೆಚ್ಚಿಗೆಯಾದವನು. ಅವನು ನನ್ನ ಅಪೇಕ್ಷೆಗೆ ತಕ್ಕಂತೆ ಕಾರ್ಯಗಳನ್ನು ಮಾಡುತ್ತಾನೆ’ ಎಂದು ದೇವರು ದಾವೀದನ ಬಗ್ಗೆ ಹೇಳಿದ್ದಾನೆ. 23“ದೇವರು ತನ್ನ ವಾಗ್ದಾನಕ್ಕನುಸಾರವಾಗಿ ದಾವೀದನ ಸಂತಾನದವರಲ್ಲಿ ಒಬ್ಬನನ್ನು ಇಸ್ರೇಲರ ರಕ್ಷಕನನ್ನಾಗಿ ಕಳುಹಿಸಿ ಕೊಟ್ಟಿದ್ದಾನೆ. ಆತನೇ ಯೇಸು. 24ಯೇಸು ಬರುವುದಕ್ಕಿಂತ ಮೊದಲು (ಸ್ನಾನಿಕ) ಯೋಹಾನನು ಯೆಹೂದ್ಯ ಜನರಿಗೆಲ್ಲಾ ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಬೋಧಿಸಿದನು. 25‘ನಾನು ಯಾರೆಂದು ನೀವು ಯೋಚಿಸುತ್ತೀರಿ? ನಾನು ಕ್ರಿಸ್ತನಲ್ಲ. ಆತನು ನನ್ನ ತರುವಾಯ ಬರುತ್ತಾನೆ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ’ ಎಂದು ಯೋಹಾನನು ತನ್ನ ಕಾರ್ಯವನ್ನು ಮಾಡಿ ಪೂರೈಸುತ್ತಿದ್ದಾಗ ಹೇಳಿಕೊಂಡಿದ್ದಾನೆ. 26“ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು. 29“ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ. 32“ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಮಗನು. ಇಂದೇ ನಾನು ನಿನ್ನನ್ನು ಪಡೆದೆನು.’ 34ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ: ‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’ 35ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ: ‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’ 36“ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ: 41‘ಅಪಹಾಸ್ಯ ಮಾಡುವವರೇ, ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ. ನೀವು ನಂಬಲೊಲ್ಲದ ಒಂದು ಕಾರ್ಯವನ್ನು ನಾನು ಮಾಡುವೆನು. ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ ನೀವು ನಂಬುವುದಿಲ್ಲ!’” 42ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗುವಾಗ, ಈ ಸಂಗತಿಗಳ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಸುವುದಕ್ಕಾಗಿ ಮುಂದಿನ ಸಬ್ಬತ್‌ದಿನದಂದು ಮತ್ತೆ ಬರಬೇಕೆಂದು ಜನರು ಅವರನ್ನು ಕೇಳಿಕೊಂಡರು. 43ಸಭೆಯು ಮುಗಿದ ಮೇಲೆ ಅನೇಕ ಯೆಹೂದ್ಯರು ಪೌಲ ಬಾರ್ನಬರನ್ನು ಆ ಸ್ಥಳದಿಂದ ಹಿಂಬಾಲಿಸಿದರು. ಯೆಹೂದ್ಯರ ಧರ್ಮಕ್ಕೆ ಸೇರಿಕೊಂಡಿದ್ದ ಅನೇಕ ಅನ್ಯಮತೀಯರೂ ಆ ಯೆಹೂದ್ಯರೊಂದಿಗಿದ್ದರು. ಮತಾಂತರಗೊಂಡಿದ್ದ ಇವರು ಸಹ ನಿಜದೇವರನ್ನು ಆರಾಧಿಸುತ್ತಿದ್ದರು. ಪೌಲ ಬಾರ್ನಬರು ಅವರೊಂದಿಗೆ ಮಾತಾಡಿ, ದೇವರ ಕೃಪೆಯಲ್ಲೇ ಭರವಸವಿಟ್ಟು ಮುಂದುವರಿಯಬೇಕೆಂದು ಪ್ರೋತ್ಸಾಹಪಡಿಸಿದರು. 44ಮುಂದಿನ ಸಬ್ಬತ್‌ದಿನದಂದು, ಪ್ರಭುವಿನ ವಾಕ್ಯವನ್ನು ಕೇಳುವುದಕ್ಕಾಗಿ ಬಹುಮಟ್ಟಿಗೆ ನಗರದ ಜನರೆಲ್ಲರೂ ನೆರೆದುಬಂದರು. 45ಇದನ್ನು ಕಂಡ ಯೆಹೂದ್ಯರಿಗೆ ಬಹಳ ಅಸೂಯೆಯಾಯಿತು. ಅವರು ಪೌಲನ ಮಾತುಗಳನ್ನು ಕಟುವಾಗಿ ದೂಷಿಸಿ ಅವುಗಳಿಗೆ ವಿರೋಧವಾಗಿ ವಾದಿಸಿದರು. 46ಆದರೆ ಪೌಲ ಬಾರ್ನಬರು ಬಹು ಧೈರ್ಯದಿಂದ ಮಾತಾಡಿ, “ನಾವು ದೇವರ ಸಂದೇಶವನ್ನು ಯೆಹೂದ್ಯರಾದ ನಿಮಗೆ ಮೊದಲು ಹೇಳಬೇಕು. ಆದರೆ ನೀವು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ಎಣಿಸಿಕೊಂಡು ತಿರಸ್ಕರಿಸುತ್ತಿದ್ದೀರಿ. ಆದ್ದರಿಂದ ನಾವು ಅನ್ಯಧರ್ಮದವರ ಬಳಿಗೆ ಹೋಗುತ್ತೇವೆ! 47ಏಕೆಂದರೆ ಪ್ರಭುವು ನಮಗೆ ಕೊಟ್ಟ ಆಜ್ಞೆ ಇಂತಿದೆ: ‘ಲೋಕದ ಕಟ್ಟಕಡೆಯಲ್ಲಿರುವ ಜನರೆಲ್ಲರಿಗೂ ನೀನು ರಕ್ಷಕನಾಗಿರಬೇಕೆಂದು ನಾನು ನಿನ್ನನ್ನು ಇತರ ಜನಾಂಗಗಳಿಗೆ ಬೆಳಕನ್ನಾಗಿ ಮಾಡಿದ್ದೇನೆ.’” 48ಪೌಲನ ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲದ ಜನರು ಬಹು ಸಂತೋಷಪಟ್ಟು ಪ್ರಭುವಿನ ಸಂದೇಶಕ್ಕಾಗಿ ಸ್ತುತಿಸಿದರು. ನಿತ್ಯಜೀವವನ್ನು ಹೊಂದಿಕೊಳ್ಳಲು ಆಯ್ಕೆಯಾಗಿದ್ದವರೆಲ್ಲರೂ ನಂಬಿಕೊಂಡರು. 49ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು. 50ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು. 51ಆದ್ದರಿಂದ ಪೌಲ ಬಾರ್ನಬರು ಅವರ ವಿರೋಧವಾಗಿ ತಮ್ಮ ಕಾಲಿನ ಧೂಳನ್ನು ಝಾಡಿಸಿ, ಇಕೋನಿಯಾ ಪಟ್ಟಣಕ್ಕೆ ಹೋದರು. 52ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.


Copyrighted Material
Learn More

will be added

X\