ಅಪೊಸ್ತಲರ ಕಾರ್ಯಗಳು 25

1ಫೆಸ್ತನು ರಾಜ್ಯಪಾಲನಾಗಿ ಮೂರು ದಿನಗಳಾದ ಮೇಲೆ ಸೆಜರೇಯದಿಂದ ಜೆರುಸಲೇಮಿಗೆ ಹೋದನು. 2ಮಹಾಯಾಜಕರು ಮತ್ತು ಪ್ರಮುಖ ಯೆಹೂದ್ಯ ನಾಯಕರು ಫೆಸ್ತನ ಎದುರಿನಲ್ಲಿ ಪೌಲನಿಗೆ ವಿರೋಧವಾಗಿ ದೋಷಾರೋಪಣೆಗಳನ್ನು ಹೇಳಿದರು. 3ಅಲ್ಲದೆ ಪೌಲನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿಕೊಡಬೇಕೆಂದು ಅವರು ಫೆಸ್ತನನ್ನು ಕೇಳಿಕೊಂಡರು. ಅವರು ಪೌಲನನ್ನು ಮಾರ್ಗದಲ್ಲೇ ಕೊಲ್ಲಬೇಕೆಂಬ ಯೋಜನೆ ಮಾಡಿಕೊಂಡಿದ್ದರು. 4ಆದರೆ ಫೆಸ್ತನು, “ಇಲ್ಲ! ಪೌಲನನ್ನು ಸೆಜರೇಯದಲ್ಲೇ ಇರಿಸಲಾಗುವುದು. ನಾನೇ ಅಲ್ಲಿಗೆ ಬೇಗ ಹೋಗಲಿದ್ದೇನೆ. 5ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು. 6ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು. 7ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ. 8ಪೌಲನು ಪ್ರತಿವಾದ ಮಾಡುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ ದೇವಾಲಯಕ್ಕೆ ವಿರುದ್ಧವಾಗಲಿ ಸೀಸರನಿಗೆ ವಿರುದ್ಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ” ಎಂದು ಹೇಳಿದನು. 9ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು. 10ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು. 12ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು. 13ಕೆಲವು ದಿನಗಳಾದ ಮೇಲೆ ರಾಜ ಅಗ್ರಿಪ್ಪನು ಮತ್ತು ಬೆರ್ನಿಕೆ ರಾಣಿ ಫೆಸ್ತನನ್ನು ವಂದಿಸಲು ಸೆಜರೇಯಕ್ಕೆ ಬಂದರು. 14ಅವರು ಅಲ್ಲಿ ಅನೇಕ ದಿನಗಳವರೆಗೆ ಇದ್ದರು. ಫೆಸ್ತನು ಪೌಲನ ವ್ಯಾಜ್ಯದ ಬಗ್ಗೆ ರಾಜನಿಗೆ ಈ ರೀತಿ ತಿಳಿಸಿದನು: “ಫೇಲಿಕ್ಸನು ಸೆರೆಮನೆಯಲ್ಲೇ ಬಿಟ್ಟುಹೋದ ಒಬ್ಬ ವ್ಯಕ್ತಿ ಇದ್ದಾನೆ. 15ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು. 16ಆದರೆ ನಾನು, ‘ದೋಷಾರೋಪಣೆ ಹೊರಿಸಲ್ಪಟ್ಟಿರುವ ವ್ಯಕ್ತಿಯನ್ನು ತೀರ್ಪಿಗಾಗಿ ಬೇರೆಯವರಿಗೆ ಒಪ್ಪಿಸುವುದು ರೋಮ್‌ನವರ ಪದ್ಧತಿಯಲ್ಲ. ಮೊದಲನೆಯದಾಗಿ, ಅವನು ತನ್ನ ಮೇಲೆ ದೋಷಾರೋಪಣೆ ಮಾಡುತ್ತಿರವವರನ್ನು ಮುಖಾಮುಖಿಯಾಗಿ ಸಂಧಿಸಿ ಅವರ ದೋಷಾರೋಪಣೆಗಳಿಗೆ ವಿರೋಧವಾಗಿ ತನ್ನನ್ನು ಪ್ರತಿಪಾದಿಸಿಕೊಳ್ಳಲು ಅವಕಾಶ ಕೊಡಲೇಬೇಕು’ ಎಂದು ಹೇಳಿದೆನು. 17“ಆದ್ದರಿಂದ ಅವರು ಇಲ್ಲಿಗೆ ಬಂದಾಗ, ನಾನು ತಡಮಾಡದೆ ಮರುದಿನವೇ ನ್ಯಾಯಾಸ್ಥಾನದಲ್ಲಿ ಕುಳಿತು ಆ ಮನುಷ್ಯನನ್ನು (ಪೌಲನನ್ನು) ಒಳಗೆ ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದೆನು. 18ಯೆಹೂದ್ಯರು ನಿಂತುಕೊಂಡು ಅವನ ಮೇಲೆ ದೋಷಾರೋಪಣೆಗಳನ್ನು ಹೊರಿಸಿದರು. ಆದರೆ ನಾನು ಯೋಚಿಸಿದ ಪ್ರಕಾರ ಯೆಹೂದ್ಯರು ಅವನ ಮೇಲೆ ಯಾವ ಕೆಟ್ಟ ಅಪರಾಧವನ್ನಾಗಲಿ ಹೊರಿಸಲಿಲ್ಲ. 19ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು. 20ಈ ಸಂಗತಿಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ಪ್ರಶ್ನೆಗಳನ್ನು ಕೇಳಲಿಲ್ಲ. ಆದರೆ ನಾನು ಪೌಲನಿಗೆ, ‘ನೀನು ಜೆರುಸಲೇಮಿಗೆ ಹೋಗಿ ಅಲ್ಲೇ ನ್ಯಾಯತೀರ್ಪು ಹೊಂದಲು ಬಯಸುವೆಯಾ?’ ಎಂದು ಕೇಳಿದೆನು. 21ಅದಕ್ಕೆ ಅವನು, ‘ಚಕ್ರವರ್ತಿಯೇ (ಸೀಸರನೇ) ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನ್ನನ್ನು ಸಂರಕ್ಷಿಸಬೇಕು’ ಎಂದು ಕೇಳಿಕೊಂಡನು. ಆದ್ದರಿಂದ ರೋಮಿನಲ್ಲಿರುವ ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿರಿಸಬೇಕೆಂದು ಆಜ್ಞಾಪಿಸಿದೆನು.” 22ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಹೇಳುವುದನ್ನು ಕೇಳುವುದಕ್ಕೆ ನನಗೂ ಇಷ್ಟವಿದೆ” ಎಂದು ಹೇಳಿದನು. ಫೆಸ್ತನು, “ಅವನು ಹೇಳುವುದನ್ನು ನೀನು ನಾಳೆ ಕೇಳಬಹುದು!” ಎಂದು ಹೇಳಿದನು. 23ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು. 24ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು. 25ನಾನು ಇವನನ್ನು ವಿಚಾರಣೆ ಮಾಡಿದಾಗ ಇವನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಸೀಸರನಿಂದಲೇ ತನಗೆ ನ್ಯಾಯತೀರ್ಪಾಗಬೇಕೆಂದು ಇವನು ಕೇಳಿಕೊಂಡಿದ್ದಾನೆ. ಆದ್ದರಿಂದ ಇವನನ್ನು ರೋಮಿಗೆ ಕಳುಹಿಸಲು ನಾನು ತೀರ್ಮಾನಿಸಿದೆ. 26ಆದರೆ ಇವನ ವಿಷಯದಲ್ಲಿ ಸೀಸರನಿಗೆ ಬರೆಯಲು ನಿರ್ದಿಷ್ಟವಾದ ಅಪರಾಧವೇನೂ ನನಗೆ ತೋರುತ್ತಿಲ್ಲ. ಆದ್ದರಿಂದ ನಾನು ಇವನನ್ನು ನಿಮ್ಮೆಲ್ಲರ ಮುಂದೆಯೂ ವಿಶೇಷವಾಗಿ ರಾಜನಾದ ಅಗ್ರಿಪ್ಪನ ಮುಂದೆಯೂ ತಂದಿದ್ದೇನೆ. ಆದ್ದರಿಂದ ನೀವು ಇವನನ್ನು ಪ್ರಶ್ನಿಸಿ ಇವನ ಬಗ್ಗೆ ಸೀಸರನಿಗೆ ಬರೆಯಲು ಏನಾದರೂ ವಿಷಯವುನ್ನು ಕೊಡಬಲ್ಲಿರೆಂದು ನಿರೀಕ್ಷಿಸುತ್ತೇನೆ. 27ನಾನು ಯೋಚಿಸುವಂತೆ, ಒಬ್ಬ ಕೈದಿಯ ವಿರುದ್ಧವಿರುವ ದೋಷಾರೋಪಣೆಗಳನ್ನು ಸ್ಪಷ್ಟಪಡಿಸದೆ ಅವನನ್ನು ಸೀಸರನ ಬಳಿಗೆ ಕಳುಹಿಸುವುದು ಮೂರ್ಖತನವಾಗಿದೆ.”


Copyrighted Material
Learn More

will be added

X\