ಇಬ್ರಿಯರಿಗೆ 1

1ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. 2ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. 3ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. 4ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು. 5ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ: “ನೀನು ನನ್ನ ಮಗ; ಈ ದಿನ ನಾನು ನಿನ್ನ ತಂದೆಯಾದೆನು.” ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ: “ನಾನು ಅವನ ತಂದೆಯಾಗಿರುವೆನು, ಅವನು ನನ್ನ ಮಗನಾಗಿರುವನು.” 6ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ, “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.” 7ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ: “ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು. ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.” 8ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು: “ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು. ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ. 9ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ. ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.” 10ಇದಲ್ಲದೆ ದೇವರು ಹೀಗೆನ್ನುತ್ತಾನೆ: “ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ. ಗಗನಮಂಡಲವು ನಿನ್ನ ಕೈಕೆಲಸವಾಗಿದೆ. 11ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ. ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು. 12ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ. ಅವು ವಸ್ತ್ರಗಳಂತೆ ಬದಲಾಗುತ್ತವೆ. ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ. ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.” 13ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ: “ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ, ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.” 14ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.


Copyrighted Material
Learn More

will be added

X\