ಯೋಹಾನ 16

1“ಜನರು ನಿಮ್ಮ ನಂಬಿಕೆಯನ್ನು ನಾಶಮಾಡಲಾಗದಂತೆ ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ. 3ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು. 4ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ. “ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು. 5ಈಗಲಾದರೋ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತಿದ್ದೇನೆ. ಆದರೆ ನಿಮ್ಮಲ್ಲಿ ಒಬ್ಬರಾದರೂ, ‘ನೀನು ಎಲ್ಲಿಗೆ ಹೋಗುತ್ತಿರುವೆ?’ ಎಂದು ನನ್ನನ್ನು ಕೇಳಲಿಲ್ಲ. 6ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದರಿಂದ ನಿಮ್ಮ ಹೃದಯಗಳು ದುಃಖದಿಂದ ತುಂಬಿಹೋಗಿವೆ. 7ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. 8“ಸಹಾಯಕನು ಬಂದು ಪಾಪ, ನೀತಿ, ನ್ಯಾಯತೀರ್ಪು ಈ ವಿಷಯಗಳ ಬಗ್ಗೆ ಲೋಕಕ್ಕೆ ತಿಳಿಸಿಕೊಡುವನು. 9ನನ್ನನ್ನು ನಂಬದಿರುವುದರಿಂದ ಜನರಲ್ಲಿ ಪಾಪವಿದೆಯೆಂದು ಆ ಸಹಾಯಕನು ನಿರೂಪಿಸುವನು. 10ನಾನು ತಂದೆಯ ಬಳಿಗೆ ಹೋಗುವುದರಿಂದ ನೀತಿಯ ವಿಷಯವಾಗಿಯೂ ಆತನು ಜನರಿಗೆ ನಿರೂಪಿಸುವನು. ಇನ್ನು ಮೇಲೆ ನೀವು ನನ್ನನ್ನು ನೋಡುವುದಿಲ್ಲ. 11ನ್ಯಾಯತೀರ್ಪಿನ ಕುರಿತಾದ ಸತ್ಯವನ್ನು ಆ ಸಹಾಯಕನು ಈ ಲೋಕಕ್ಕೆ ಸಾಧರಪಡಿಸುವನು, ಏಕೆಂದರೆ ಈ ಲೋಕದ ಅಧಿಪತಿಗೆ ಈಗಾಗಲೇ ನ್ಯಾಯತೀರ್ಪಾಗಿದೆ. 12“ನಾನು ನಿಮಗೆ ತಿಳಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಆದರೆ ಈಗ ಆ ಸಂಗತಿಗಳನ್ನು ಸ್ವೀಕರಿಸಿಕೊಳ್ಳಲು ನಿಮಗೆ ಬಹು ಕಷ್ಟವಾಗಬಹುದು. 13ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ. 14ಸತ್ಯದ ಆತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು ನಿಮಗೆ ತಿಳಿಸುವುದರ ಮೂಲಕ ನನ್ನನ್ನು ಮಹಿಮೆಪಡಿಸುವನು. 15ನನ್ನ ತಂದೆಗೆ ಇರುವುದೆಲ್ಲಾ ನನ್ನದೇ. ಆದಕಾರಣ, ಪವಿತ್ರಾತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು, ನಿಮಗೆ ತಿಳಿಸುತ್ತಾನೆ ಎಂದು ನಾನು ಹೇಳಿದೆನು. 16“ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.” 17ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 19ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು. 21“ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು. 25“ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು. 29ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು. 31ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ. 33“ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.


Copyrighted Material
Learn More

will be added

X\