ಲೂಕ 18

1ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: 2“ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. 3ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. 4ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. 5ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.” 6ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. 7ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! 8ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು. 9ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು. 10“ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು. 11ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. 12ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು. 13“ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು. 14ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.” 15ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು. 16ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ. 17ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು. 18ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು. 19ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’” ಎಂದನು. 21ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು. 22ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು. 24ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು. 26ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು. 27ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು. 28ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು. 29ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು. 31ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು. 35ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು. 37ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು. 38ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು. 39ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು. 40ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41“ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು. ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು. 42ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು. 43ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.


Copyrighted Material
Learn More

will be added

X\