ಲೂಕ 6

1ಒಂದಾನೊಂದು ಸಬ್ಬತ್‌ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದನು. ಆತನ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ಕಾಳನ್ನು ತಿಂದರು. 2ಕೆಲವು ಫರಿಸಾಯರು, “ನೀವು ಸಬ್ಬತ್‌ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು. 3ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಿದ್ದೀರಿ. 4ದಾವೀದನು ದೇವರ ಮಂದಿರದೊಳಕ್ಕೆ ಹೋಗಿ, ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ತೆಗೆದುಕೊಂಡು ತಿಂದನು. ತನ್ನ ಜೊತೆ ಇದ್ದ ಜನರಿಗೂ ಸ್ವಲ್ಪ ಕೊಟ್ಟನು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧ. ಯಾಜಕರು ಮಾತ್ರವೇ ಈ ರೊಟ್ಟಿಯನ್ನು ತಿನ್ನಬಹುದು ಎಂದು ಧರ್ಮಶಾಸ್ತ್ರ ಹೇಳುತ್ತದೆ” ಎಂದು ಉತ್ತರಿಸಿ, 5“ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು. 6ಮತ್ತೊಂದು ಸಬ್ಬತ್‌ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಿಸಿದನು. ಬಲಗೈ ಬತ್ತಿಹೋಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. 7ಯೇಸು ಅವನನ್ನು ವಾಸಿಮಾಡಿದರೆ, ಆತನ ಮೇಲೆ ತಪ್ಪು ಹೊರಿಸಬಹುದೆಂದು ಧರ್ಮೋಪದೇಶಕರು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. 8ಆದರೆ ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಯೇಸುವು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಬಂದು ಇಲ್ಲಿ ನಿಂತುಕೊ” ಎಂದು ಹೇಳಿದನು. ಅವನು ಎದ್ದುಬಂದು ನಿಂತನು. 9ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು. 10ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು. 11ಫರಿಸಾಯರು ಮತ್ತು ಧರ್ಮೋಪದೇಶಕರು ಬಹಳವಾಗಿ ಕೋಪಗೊಂಡರು. ಅವರು, “ನಾವು ಯೇಸುವಿಗೆ ಏನು ಮಾಡೋಣ?” ಎಂದು ತಮ್ಮತಮ್ಮೊಳಗೆ ಸಂಚುಮಾಡಿದರು. 12ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. 13ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರನ್ನು ಕರೆದನು. ಅವರಲ್ಲಿ ಹನ್ನೆರಡು ಮಂದಿಯನ್ನು ಆತನು ಆರಿಸಿಕೊಂಡನು. ಯೇಸು ಈ ಹನ್ನೆರಡು ಜನರಿಗೆ, “ಅಪೊಸ್ತಲರು” ಎಂದು ಹೆಸರಿಟ್ಟನು. ಅವರು ಯಾರೆಂದರೆ: 14ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರಿಟ್ಟನು.) ಮತ್ತು ಪೇತ್ರನ ಸಹೋದರನಾದ ಅಂದ್ರೆಯ, ಯಾಕೋಬ ಮತ್ತು ಯೋಹಾನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, 15ಮತ್ತಾಯ, ತೋಮ, ಯಾಕೋಬ (ಅಲ್ಫಾಯನ ಮಗ) ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, 16ಯೂದ (ಯಾಕೋಬನ ಮಗ) ಮತ್ತು ಇಸ್ಕರಿಯೋತ ಯೂದ (ಯೇಸುವಿಗೆ ದ್ರೋಹ ಮಾಡಿದವನು ಇವನೇ.) 17ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು! 20ಯೇಸು ತನ್ನ ಶಿಷ್ಯರನ್ನು ನೋಡಿ ಹೇಳಿದ್ದೇನೆಂದರೆ, “ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ. 21ಹಸಿವೆಗೊಂಡಿರುವ ನೀವು ಧನ್ಯರು; ನಿಮಗೆ ತೃಪ್ತಿಯಾಗುವುದು. ಅಳುತ್ತಿರುವ ನೀವು ಧನ್ಯರು; ಆನಂದದಿಂದ ನೀವು ನಗುವಿರಿ. 22“ನೀವು ಮನುಷ್ಯಕುಮಾರನಿಗೆ ಸೇರಿದವರಾಗಿರುವುದರಿಂದ ಜನರು ನಿಮ್ಮನ್ನು ದ್ವೇಷಿಸಿದರೆ, ತುಚ್ಛೀಕರಿಸಿದರೆ, ಅವಮಾನ ಮಾಡಿದರೆ, ನಿಮ್ಮನ್ನು ಕೆಟ್ಟವರೆಂದು ಹೇಳಿದರೆ ನೀವು ಧನ್ಯರು. 23ಆ ಸಮಯದಲ್ಲಿ ಆನಂದಪಡಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. ಈ ಜನರು ನಿಮಗೆ ಮಾಡಿದಂತೆಯೇ ಅವರ ಪಿತೃಗಳು ಪ್ರವಾದಿಗಳಿಗೆ ಮಾಡಿದರು. 24“ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸುಖಕರವಾದ ಜೀವನವನ್ನು ಅನುಭವಿಸಿದಿರಿ. 25ಈಗ ಹೊಟ್ಟೆ ತುಂಬಿರುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ನಗುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಡುವಿರಿ ಮತ್ತು ಅಳುವಿರಿ. 26“ಜನರಿಂದ ಯಾವಾಗಲೂ ಹೊಗಳಿಸಿಕೊಳ್ಳುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳು ಪ್ರವಾದಿಗಳನ್ನು ಯಾವಾಗಲೂ ಹೊಗಳುತ್ತಿದ್ದರು. 27“ನನ್ನ ಮಾತುಗಳನ್ನು ಆಲಿಸುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ: ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. 28ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ಹೀನೈಸುವ ಜನರಿಗೋಸ್ಕರ ಪ್ರಾರ್ಥಿಸಿರಿ. 29ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ. 30ನಿಮ್ಮನ್ನು ಬೇಡುವ ಪ್ರತಿಯೊಬ್ಬನಿಗೆ ಕೊಡಿ. ಒಬ್ಬನು ನಿಮ್ಮಿಂದ ಏನಾದರೂ ತೆಗೆದುಕೊಂಡಾಗ ಅದನ್ನು ಹಿಂದಕ್ಕೆ ಕೊಡೆಂದು ಕೇಳಬೇಡಿ. 31ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆಸೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. 32“ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ನಿಮಗೆ ಹೊಗಳಿಕೆ ಏಕೆ ಬರಬೇಕು? ಇಲ್ಲ! ತಮ್ಮನ್ನು ಪ್ರೀತಿಸುವವರನ್ನು ಪಾಪಿಷ್ಠರು ಸಹ ಪ್ರೀತಿಸುತ್ತಾರೆ! 33ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರೆ! 34ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ! 35“ಆದ್ದರಿಂದ ನಿಮ್ಮ ವೈರಿಗಳನ್ನು ಪ್ರೀತಿಸಿರಿ. ಅವರಿಗೆ ಒಳ್ಳೆಯದನ್ನು ಮಾಡಿರಿ. ನೀವು ಅವರಿಗೆ ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತನಾದ ದೇವರ ಮಕ್ಕಳಾಗುವಿರಿ. ಏಕೆಂದರೆ ದೇವರು ಪಾಪಿಷ್ಠರಿಗೂ ಕೃತಜ್ಞತೆಯಿಲ್ಲದವರಿಗೂ ಒಳ್ಳೆಯವನಾಗಿದ್ದಾನೆ. 36ನಿಮ್ಮ ಪರಲೋಕದ ತಂದೆಯು ಕರುಣಾಮಯನಾಗಿರುವಂತೆ ನೀವೂ ಕರುಣೆಯುಳ್ಳವರಾಗಿರಿ. 37“ಬೇರೆಯವರಿಗೆ ತೀರ್ಪು ಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಬೇರೆಯವರನ್ನು ಅಪರಾಧಿಗಳೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಇತರರನ್ನು ಕ್ಷಮಿಸಿರಿ, ಆಗ ನಿಮಗೂ ಕ್ಷಮಾಪಣೆ ಆಗುವುದು. 38ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.” 39ಯೇಸು ಅವರಿಗೆ ಈ ಸಾಮ್ಯವನ್ನೂ ಹೇಳಿದನು: “ಒಬ್ಬ ಕುರುಡನು ಇನ್ನೊಬ್ಬ ಕುರುಡನನ್ನು ನಡಿಸುವುದಕ್ಕಾದೀತೇ? ಇಲ್ಲ! ಅವರಿಬ್ಬರೂ ಗುಂಡಿಯಲ್ಲಿ ಬೀಳುವರು. 40ಶಿಷ್ಯನು ಗುರುವಿಗಿಂತ ಮೇಲಲ್ಲ. ಆದರೆ, ಶಿಷ್ಯನು ಪೂರ್ಣ ಕಲಿತಾಗ ಗುರುವಿನಂತೆ ಆಗುವನು. 41“ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? 42ನೀನು ಅವನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆಯುತ್ತೇನೆ’ ಎಂದು ನೀನು ಹೇಗೆ ಹೇಳಬಲ್ಲೆ? ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯೇ ನಿನಗೆ ಕಾಣಿಸದು! ನೀನು ಕಪಟಿ. ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಿಸುವುದು. 43“ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44“ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು. 46“ನನ್ನನ್ನು ಸ್ವಾಮೀ, ಸ್ವಾಮೀ, ಎಂದು ಕರೆದು ನಾನು ಹೇಳುವುದನ್ನು ನಡಿಸದೆ ಇರುವುದೇಕೆ? 47ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ, ಅವುಗಳಿಗೆ ವಿಧೇಯನಾಗುವ ಪ್ರತಿಯೊಬ್ಬನು ಮನೆಯನ್ನು ಕಟ್ಟುವ ವ್ಯಕ್ತಿಯಂತಿರುವನು. 48ಅವನು ಆಳವಾದ ಅಸ್ತಿವಾರ ಹಾಕಿ, ಬಲವಾದ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುತ್ತಾನೆ. ಪ್ರವಾಹವು ಏರಿಬಂದು ಆ ಮನೆಗೆ ಅಪ್ಪಳಿಸಿದರೂ ಆ ಮನೆಯನ್ನು ಕದಲಿಸಲಾರದು; ಏಕೆಂದರೆ ಆ ಮನೆಯು ಬಲವಾಗಿ ಕಟ್ಟಲ್ಪಟ್ಟಿದೆ. 49“ಅದೇ ರೀತಿಯಲ್ಲಿ, ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದ ವ್ಯಕ್ತಿಯು ಅಸ್ತಿವಾರವಿಲ್ಲದೆ ನೆಲದಮೇಲೆ ಮನೆ ಕಟ್ಟಿದ ಮನುಷ್ಯನಂತಿರುವನು. ಪ್ರವಾಹ ಬಂದಾಗ, ಮನೆಯು ಬೇಗನೆ ಕುಸಿದುಹೋಗಿ ಸಂಪೂರ್ಣವಾಗಿ ನಾಶವಾಗುತ್ತದೆ.”


Copyrighted Material
Learn More

will be added

X\