ಮಾರ್ಕ 7

1ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. 2ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. 3ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. 4ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು. 5ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು. 6ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ: ‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ, ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ. 7ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ. ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’ 8ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು. 9ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! 10‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’ ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’ ಎಂತಲೂ ಮೋಶೆಯು ಹೇಳಿದ್ದಾನೆ. 11ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, 12ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. 13ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು. 14ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 17ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.) 20ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 24ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು. 27ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು. 28ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು. 29ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು. 30ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು. 31ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು. 33ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು. 36ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.


Copyrighted Material
Learn More

will be added

X\