ಮಾರ್ಕ 8

1ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, 2“ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. 3ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು. 4ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು. 5ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು. ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು. 6ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. 7ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು. 8ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 9ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು. 11ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನನ್ನು ಪರೀಕ್ಷಿಸಲು ಪ್ರಶ್ನೆಗಳನ್ನು ಕೇಳಿದರು. ಅವರು ಯೇಸುವಿಗೆ, “ನೀನು ದೇವರಿಂದ ಬಂದವನೆಂದು ತೋರಿಸಲು ಒಂದು ಸೂಚಕಕಾರ್ಯವನ್ನು ಮಾಡು” ಎಂದರು. 12ಆಗ ಯೇಸು ನಿಟ್ಟುಸಿರುಬಿಟ್ಟು ಅವರಿಗೆ, “ನೀವು ಸೂಚಕಕಾರ್ಯವನ್ನು ನೋಡಬಯಸುವುದೇಕೆ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮಗೆ ಯಾವ ಸೂಚಕಕಾರ್ಯವನ್ನೂ ತೋರಿಸಲಾಗುವುದಿಲ್ಲ” ಎಂದು ಹೇಳಿದನು. 13ನಂತರ ಯೇಸು ಫರಿಸಾಯರ ಬಳಿಯಿಂದ ಹೊರಟು ದೋಣಿಯಲ್ಲಿ ಸರೋವರದ ಆಚೆಯ ದಡಕ್ಕೆ ಹೋದನು. 14ಶಿಷ್ಯರು ದೋಣಿಯಲ್ಲಿ ಹೋಗುತ್ತಿದ್ದಾಗ ಅವರ ಬಳಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಅವರು ಮರೆತು ಹೆಚ್ಚು ರೊಟ್ಟಿಗಳನ್ನು ತಂದಿರಲಿಲ್ಲ. 15ಯೇಸು ಅವರಿಗೆ, “ಜಾಗರೂಕರಾಗಿರಿ! ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ಬಗ್ಗೆ ಎಚ್ಚರವಹಿಸಿರಿ” ಎಂದು ಎಚ್ಚರಿಸಿದನು. 16ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 17ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ? 18ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ. 19ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು. ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು. 20“ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು. ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು. 21ಆಗ ಯೇಸು ಅವರಿಗೆ, “ನಾನು ಮಾಡಿದ ಈ ಕಾರ್ಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ, ಆದರೆ ನೀವಿನ್ನೂ ಅರ್ಥಮಾಡಿಕೊಳ್ಳುವುದಿಲ್ಲವೇ?” ಎಂದು ಕೇಳಿದನು. 22ಯೇಸು ಮತ್ತು ಆತನ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವು ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು. 24ಆ ಕುರುಡನು ತಲೆಯೆತ್ತಿ ನೋಡಿ, “ಹೌದು, ನನಗೆ ಜನರು ಕಾಣುತ್ತಾರೆ. ಅವರು ಮರಗಳಂತೆ ಕಂಡರೂ ನಡೆದಾಡುತ್ತಿದ್ದಾರೆ” ಎಂದು ಹೇಳಿದನು. 25ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು. 27ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು. 28ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು. 29ಆಗ ಯೇಸು ಅವರಿಗೆ, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು. ಕೂಡಲೇ ಪೇತ್ರನು, “ನೀನು ಬರಬೇಕಾದ ಕ್ರಿಸ್ತನು” ಎಂದು ಉತ್ತರಿಸಿದನು. 30ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು. 31ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು. 32ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ. ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು. 33ಆದರೆ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ” ಎಂದು ಗದರಿಸಿದನು. 34ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು. 35ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ. 36ಒಬ್ಬನು ಪ್ರಪಂಚವನ್ನೆಲ್ಲಾ ಸಂಪಾದಿಸಿಕೊಂಡು ತನ್ನ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಪ್ರಯೋಜನವೇನು? 37ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ? 38ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.


Copyrighted Material
Learn More

will be added

X\