ಮತ್ತಾಯ 21

1ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. 2ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. 3ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು. 4ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ: 5“ಸೀಯೋನ್ ನಗರಿಗೆ ಹೇಳಿರಿ, ‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ. ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ. ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’” 6ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. 7ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. 8ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. 9ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು: “ದಾವೀದನ ಕುಮಾರನನ್ನು ಕೊಂಡಾಡಿರಿ! ‘ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೇವರು ಆಶೀರ್ವದಿಸಲಿ!’ ಪರಲೋಕದ ದೇವರನ್ನು ಕೊಂಡಾಡಿರಿ!” 10ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು. 11ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು. 12ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ” ಎಂದು ಹೇಳಿದನು. 14ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು. 16ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು. ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’ ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು. 17ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು. 18ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು. 20ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು. 21ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು. 23ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು. 24ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು. ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು. 27ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು. 28“ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು. 29“ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು. 30“ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ. 31“ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?” ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ. 33“ಈ ಸಾಮ್ಯವನ್ನು ಕೇಳಿರಿ: ಒಬ್ಬ ಮನುಷ್ಯನಿಗೆ ಒಂದು ಸ್ವಂತ ತೋಟವಿತ್ತು. ಅವನು ತೋಟದಲ್ಲಿ ದ್ರಾಕ್ಷಿಯನ್ನು ಬೆಳೆಸಿದನು; ತೋಟದ ಸುತ್ತಲೂ ಗೋಡೆ ಕಟ್ಟಿ ದ್ರಾಕ್ಷಾರಸ ತಯಾರಿಸಲು ಆಲೆಯನ್ನು ಹೂಡಿಸಿದನು. ಕಾವಲಿಗಾಗಿ ಅಟ್ಟಣೆಯನ್ನೂ ಕಟ್ಟಿಸಿದನು. ಅವನು ಆ ತೋಟವನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೊರಟುಹೋದನು. 34ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂದಾಗ ತನ್ನ ಪಾಲನ್ನು ತೆಗೆದುಕೊಂಡು ಬರಲು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. 35“ಆದರೆ ರೈತರು ಆ ಸೇವಕರನ್ನು ಹಿಡಿದುಕೊಂಡು ಒಬ್ಬನನ್ನು ಹೊಡೆದರು; ಬೇರೊಬ್ಬನನ್ನು ಕತ್ತರಿಸಿಹಾಕಿದರು; ಮೂರನೇ ಸೇವಕನನ್ನು ಕಲ್ಲೆಸೆದು ಕೊಂದರು. 36ಆದ್ದರಿಂದ ಅವನು ಮೊದಲನೆ ಸಲ ಕಳುಹಿಸಿದ ಸೇವಕರಿಗಿಂತಲೂ ಹೆಚ್ಚು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ಆದರೆ ರೈತರು ಮೊದಲನೆ ಸಲ ಮಾಡಿದಂತೆಯೇ ಈ ಸೇವಕರಿಗೂ ಮಾಡಿದರು. 37ಆಗ ಅವನು, ‘ರೈತರು ನನ್ನ ಮಗನನ್ನು ಗೌರವಿಸುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದನು. 38“ಆದರೆ ರೈತರು ಮಗನನ್ನು ನೋಡಿದಾಗ, ‘ಇವನು ತೋಟದ ಒಡೆಯನ ಮಗನು. ಈ ತೋಟ ಇವನದಾಗುವುದು. ನಾವು ಇವನನ್ನು ಕೊಂದರೆ, ಈ ತೋಟ ನಮ್ಮದಾಗುವುದು’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 39ಆದ್ದರಿಂದ ರೈತರು ಮಗನನ್ನು ಹಿಡಿದು ತೋಟದಿಂದ ಹೊರಕ್ಕೆಸೆದು ಅವನನ್ನು ಕೊಂದುಹಾಕಿದರು. 40“ಹೀಗಿರಲು ತೋಟದ ಯಜಮಾನನು ತಾನೇ ಬಂದಾಗ ಈ ರೈತರಿಗೆ ಏನು ಮಾಡುತ್ತಾನೆ?” 41ಯೆಹೂದ್ಯ ಯಾಜಕರು ಮತ್ತು ನಾಯಕರು, “ಅವನು ಖಂಡಿತವಾಗಿ ಆ ದುಷ್ಟಜನರನ್ನು ಕೊಂದು ಸುಗ್ಗಿಕಾಲದಲ್ಲಿ ತನ್ನ ಪಾಲನ್ನು ತನಗೆ ಕೊಡುವ ರೈತರಿಗೆ ಅದನ್ನು ಗುತ್ತಿಗೆಗೆ ಕೊಡುತ್ತಾನೆ” ಎಂದು ಹೇಳಿದರು. 42ಯೇಸು ಅವರಿಗೆ, “ಖಂಡಿತವಾಗಿಯೂ ನೀವು ಇದನ್ನು ಪವಿತ್ರ ಗ್ರಂಥದಲ್ಲಿ ಓದಿದ್ದೀರಿ: ‘ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು. ಪ್ರಭುವು ಇದನ್ನು ಮಾಡಿದನು. ಇದು ನಮಗೆ ಆಶ್ಚರ್ಯಕರವಾಗಿದೆ.’ 43“ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ರಾಜ್ಯವು ನಿಮ್ಮಿಂದ ತೆಗೆದುಹಾಕಲ್ಪಟ್ಟು ಆ ರಾಜ್ಯದಲ್ಲಿ ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು. 44ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಜಜ್ಜಿಹೋಗುವನು.” 45ಮಹಾಯಾಜಕರು ಮತ್ತು ಫರಿಸಾಯರು ಯೇಸು ಹೇಳಿದ ಈ ಸಾಮ್ಯಗಳನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೆಂದು ತಿಳಿದುಕೊಂಡರು. 46ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು.


Copyrighted Material
Learn More

will be added

X\