ಪ್ರಕಟನೆ 1

1ಇದು ಯೇಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವುದನ್ನು ತನ್ನ ಸೇವಕರಿಗೆ ತೋರ್ಪಡಿಸುವುದಕ್ಕಾಗಿ ಯೇಸುವಿಗೆ ಇವುಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇವುಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು. 2ಯೋಹಾನನು ತಾನು ಕಂಡದ್ದೆಲ್ಲವನ್ನು ತಿಳಿಸಿದನು. ಇದು ಯೇಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. 3ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಓದುವವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವವರೂ ಭಾಗ್ಯವಂತರಾಗಿದ್ದಾರೆ. ಏಕೆಂದರೆ ನೆರವೇರುವ ಕಾಲವು ಸಮೀಪವಾಗಿದೆ. 4ಏಷ್ಯಾ ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ: ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು 5ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ. ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; 6ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್. 7ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್. 8ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.” 9ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು. 12ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. 17ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. 19ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. 20ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು.


Copyrighted Material
Learn More

will be added

X\