ಪ್ರಕಟನೆ 12

1ಆಗ ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆಕೆಯ ಪಾದದ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು. 2ಆಕೆಯು ಗರ್ಭಿಣಿಯಾಗಿದ್ದಳು ಆಕೆಯು ಪ್ರಸವವೇದನೆಯಿಂದ ಕೂಗಿದಳು. 3ಆಗ ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು: ಕೆಂಪಾದ ಮಹಾ ಘಟಸರ್ಪವೊಂದು ಅಲ್ಲಿತ್ತು. ಆ ಘಟಸರ್ಪಕ್ಕೆ ಏಳು ತಲೆಗಳಿದ್ದು, ಪ್ರತಿಯೊಂದು ತಲೆಯ ಮೇಲೂ ಏಳು ಕಿರೀಟಗಳಿದ್ದವು. ಆ ಸರ್ಪಕ್ಕೆ ಹತ್ತು ಕೊಂಬುಗಳಿದ್ದವು. 4ಆ ಸರ್ಪದ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಸೆಳೆದೆಳೆದು ಭೂಮಿಯ ಮೇಲೆ ಎಸೆಯಿತು. ಆ ಘಟಸರ್ಪವು ಪ್ರಸವ ವೇದನೆಪಡುತ್ತಿದ್ದ ಸ್ತ್ರೀಯ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತ್ರೀಯು ಹೆರುವ ಮಗುವನ್ನು ನುಂಗಿಹಾಕಲು ಆ ಸರ್ಪವು ಕಾದುಕೊಂಡಿತ್ತು. 5ಆ ಸ್ತ್ರೀಯು ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗೆದುಕೊಂಡು ಹೋಗಲಾಯಿತು. 6ಆ ಸ್ತ್ರೀಯು ತನಗಾಗಿ ದೇವರು ಸಿದ್ಧಪಡಿಸಿದ್ದ ಮರುಳುಗಾಡಿನ ಒಂದು ಸ್ಥಳಕ್ಕೆ ಓಡಿಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪೋಷಿಸಲಾಗುವುದು. 7ನಂತರ ಪರಲೋಕದಲ್ಲಿ ಒಂದು ಯುದ್ಧವಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟಸರ್ಪದ ವಿರುದ್ಧ ಹೋರಾಡಿದರು. ಆ ಘಟಸರ್ಪ ಮತ್ತು ಅದರ ದೂತರೂ ಹೋರಾಡಿದರು. 8ಆದರೆ ಆ ಘಟಸರ್ಪವೂ ಅದರ ದೂತರೂ ಸೋತುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. 9ಆ ಘಟಸರ್ಪವನ್ನು ಪರಲೋಕದಿಂದ (ಆ ಘಟಸರ್ಪಕ್ಕೆ ಸೈತಾನನೆಂತಲೂ ಪಿಶಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪು ಮಾರ್ಗಕ್ಕೆ ಎಳೆಯುತ್ತಿತ್ತು.) ಅದರ ದೂತರೊಂದಿಗೆ ಭೂಮಿಯ ಮೇಲೆ ಎಸೆಯಲಾಯಿತು. 10ಆಗ ಪರಲೋಕದಲ್ಲಾದ ಒಂದು ಮಹಾಶಬ್ದವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಕ್ತಿಯು ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಮ್ಮ ಸಹೋದರರ ಮೇಲೆ ದೂಷಣೆ ಮಾಡುವವನನ್ನು ಹೊರಕ್ಕೆ ಎಸೆದಿರುವುದರಿಂದ ಇವುಗಳೆಲ್ಲಾ ಬಂದಿವೆ. ನಮ್ಮ ದೇವರ ಮುಂದೆ ಹಗಲಿರುಳು ನಮ್ಮ ಸಹೋದರರ ಬಗ್ಗೆ ಅವನು ದೂರು ಹೇಳಿದನು. 11ನಮ್ಮ ಸಹೋದರರು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಸೋಲಿಸಿದರು. ಅವರು ತಮ್ಮ ಜೀವಗಳನ್ನು ಪ್ರೀತಿಸಲಿಲ್ಲ. ಅವರು ಮರಣಕ್ಕೆ ಭಯಪಡಲಿಲ್ಲ. 12ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೆಲ್ಲರೇ, ಹರ್ಷಗೊಳ್ಳಿರಿ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯುಂಟಾಗುವುದು! ಸೈತಾನನು ಕೋಪದಿಂದ ತುಂಬಿಕೊಂಡಿದ್ದಾನೆ. ತನಗಿರುವುದು ಸ್ವಲ್ಪಕಾಲವೆಂಬುದು ಅವನಿಗೆ ತಿಳಿದಿದೆ.” 13ಘಟಸರ್ಪಕ್ಕೆ ತನ್ನನ್ನು ಭೂಮಿಗೆ ತಳ್ಳಿಬಿಟ್ಟಿರುವುದು ತಿಳಿಯಿತು. ಆದ್ದರಿಂದ ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು. 14ಆದರೆ ಆ ಸ್ತ್ರೀಗೆ ಮಹಾಗರುಡನ ಎರಡು ರೆಕ್ಕೆಗಳನ್ನು ಕೊಡಲ್ಪಟ್ಟದ್ದರಿಂದ, ತನಗಾಗಿ ಮರುಳುಗಾಡಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಹಾರಿ ಹೋಗಲು ಆಕೆಗೆ ಸಾಧ್ಯವಾಯಿತು. ಅಲ್ಲಿ ಅವಳು ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುತ್ತಾ ಸರ್ಪಕ್ಕೆ ಕಾಣದಂತೆ ಮರೆಯಾಗಿರುವಳು. 15ಆಗ ಸರ್ಪವು ತನ್ನ ಬಾಯಿಂದ ನದಿಯಂತೆ ನೀರನ್ನು ಹೊರಚೆಲ್ಲಿತು. ಆ ಪ್ರವಾಹದ ನೀರು ಅವಳನ್ನು ಕೊಚ್ಚಿ ಕೊಂಡುಹೋಗಲಿ ಎಂಬುದೇ ಆ ಘಟಸರ್ಪದ ಉದ್ದೇಶವಾಗಿತ್ತು. 16ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಲು ತನ್ನ ಬಾಯನ್ನು ತೆರೆದು, ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು. 17ಆಗ ಘಟ ಸರ್ಪವು ಆ ಸ್ತ್ರೀಯ ಮೇಲೆ ಬಹಳ ಕೋಪಗೊಂಡು ಆಕೆಯ ಇತರ ಮಕ್ಕಳೆಲ್ಲರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಅನುಸರಿಸುವವರ ಮತ್ತು ಯೇಸುವಿನ ಕುರಿತು ಸಾಕ್ಷಿ ಹೇಳುವವರ ಮೇಲೆ ಹೋರಾಟ ಮಾಡಲು ಹೋಯಿತು. 18ಆ ಘಟಸರ್ಪವು ಸಮುದ್ರತೀರದಲ್ಲಿ ನಿಂತುಕೊಂಡಿತು.


Copyrighted Material
Learn More

will be added

X\